ಮಮ್ತಾಜ್ ಮಹಲ್
ದೆಹಲಿಯ ಮೊಗಲ್ ದೊರೆ ಷಹಜಹಾನನ ಪತ್ನಿ. ಮೊಗಲ್ ಆಸ್ಥಾನದಲ್ಲಿ ಅತ್ಯಂತ ಪ್ರಭಾವಶಾಲಿಯಾಗಿದ್ದ ಅಸಫ್‍ಖಾನನ ಮಗಳು. ಈಕೆಯ ನಿಜವಾದ ಹೆಸರು ಅರ್ಜುಮಂದ್‍ಬಾನು ಬೇಗಂ 1612ರಲ್ಲಿ ತನ್ನ ಇಪ್ಪತ್ತನೆಯ ವಯಸ್ಸಿನಲ್ಲಿ ಈಕೆ ಯುವರಾಜ ಖುರ್ರಮ್‍ನೊಡನೆ (ಷಹಜಹಾನ್) ಮದುವೆಯಾದಾಗ ಈಕೆಗೆ ಮಮ್ಮಾಜ್ ಮಹಲ್ (ಅರಮನೆಯ ಆಭರಣ) ಎಂಬ ಬಿರುದು ಬಂತು. ಈ ಮದುವೆಯಿಂದ ನೂರ್‍ಜಹಾನ್ ಇತಿಯದ -ಉದ್-ದೌಲಾಅಸ ಫಖಾನರ ನಡುವಣ ಬಾಂಧವ್ಯವೊಬಲವಾಗಿ ಬೇರೂರಿತು.

ಷಹಜಹಾನ್ ಹಾಗೂ ಮಮ್ತಾಜರ ದಾಂಪತ್ಯದ ಅನ್ಯೋನ್ಯತೆ ಅನುಪಮವಾದುದು. ಈ ದಂಪತಿಗಳಿಗೆ ಹದಿನಾಲ್ಕು ಮಕ್ಕಳಾದವು. ದಾರಾ, ಶೂಜಾ, ಔರಂಗಜೇಬ ಹಾಗೂ ಮುಂತಾದವರು ಇವರಲ್ಲಿ ಕೆಲವರು. ಮಮ್ತಾಜ್ ತನ್ನ ಮೂವತ್ತೊಂಬತ್ತನೆಯ ವಯಸ್ಸಿನಲ್ಲಿ ಹೆಣ್ಣು ಮಗುವಿನ ಪ್ರಸವ ಕಾಲದಲ್ಲಿ ಮೃತಳಾದಳು. ಜನಿಸಿದ ಮಗುವೂ ಒಂದೆರಡು ಗಂಟೆಗಳಲ್ಲೇ ಅಸುನೀಗಿತು. ಈಕೆ ಮರಣಿಸಿದ್ದು ಬರ್ಹಾಂಪುರದ ಬಳಿಯ ಜೈನಾಬಾದ್ ಎಂಬ ಉದ್ಯಾನದಲ್ಲಿ (1631). ಮಮ್ತಾಜಳ ಮರಣ ಸುಲ್ತಾನನ ಬದುಕಿನ ಮೇಲೆ ಗಾಢ ಪರಿಣಾಮ ಬೀರಿತು. ಮೊದಲು ಮಮ್ತಾಜಳನ್ನು ಬರ್ಹಾಂಪುರದಲ್ಲಿ ಸಮಾಧಿ ಮಾಡಲಾಯಿತು. ತರುವಾಯ ಆಗ್ರದಲ್ಲಿ ಷಹಜಹಾನ್ ತನ್ನ ಅಮರ ಪ್ರೇಮದ ಅಪೂರ್ವ ಸ್ಮಾರಕವಾಗಿ ತಾಜಮಹಲ್ಲನ್ನು ಕಟ್ಟಿಸಿದಾಗ ಈಕೆಯ ದೇಹಾವಶೇಷಗಳನ್ನು ಅಲ್ಲಿ ಸಮಾಧಿ ಮಾಡಲಾಯಿತು.
(ಎಚ್.ಎಂ.ಎನ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ